ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ) ವಿಭಾಗವು ಆಡಳಿತದಲ್ಲಿ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ, ಕಾರ್ಯವಿಧಾನಗಳಲ್ಲಿ ವಿನೂತನ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು, ಆಡಳಿತದ ಪ್ರತಿ ಹಂತದಲ್ಲಿ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಹಾಗೂ ಕಾರ್ಯ ನಿರ್ವಹಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತ ಆಡಳಿತ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳನ್ನು ವ್ಯವಹರಿಸುತ್ತಿದೆ. ಈ ವಿಭಾಗದಲ್ಲಿ ಕೆಳಕಂಡ ವಿಷಯಗಳನ್ನು ನಿರ್ವಹಿಸಲಾಗುತ್ತಿದೆ:



  • ಸಚಿವಾಲಯ ಇಲಾಖೆಗಳು ಮತ್ತು ಕ್ಷೇತ್ರ ಇಲಾಖೆಗಳ ಮುಖ್ಯಸ್ಥರುಗಳಿಗೆ ವ್ಯವಸ್ಥಾಪನೆಯ ಬಗ್ಗೆ ಸಮಾಲೋಚನಾ ಸೇವೆಯನ್ನು ಒದಗಿಸುವುದು;
  • ಸರ್ಕಾರದ ವ್ಯವಸ್ಥಾಪನಾ ಪಾತ್ರವನ್ನು ಪ್ರೋತ್ಸಾಹಿಸಿ ಅಭಿವೃದ್ಧಿಪಡಿಸುವುದು;
  • ಆಡಳಿತ ಪದ್ಧತಿಗಳು ಮತ್ತು ಆಧುನಿಕ ಕಾರ್ಯನಿರ್ವಹಣೆಯ ಮೇಲೆ ಮಾಹಿತಿಯನ್ನು ಪ್ರಚಾರಗೊಳಿಸುವುದು;
  • ದಕ್ಷಾಡಳಿತಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಕೆ;
  • ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ತರಬೇತಿ ಕಾರ್ಯನೀತಿಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು;
  • ರಾಜ್ಯ ತರಬೇತಿ ನೀತಿ ಅನುಷ್ಠಾನ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ) ಯ ಅಧೀನ ಶಾಖೆಗಳು:

ಕೇಂದ್ರ ಸರ್ಕಾರದ ರಾಷ್ಟ್ರೀಯ ತರಬೇತಿ ನೀತಿ ಮಾದರಿಯಲ್ಲಿ ರಾಜ್ಯ ತರಬೇತಿ ನೀತಿಯನ್ನು ಜಾರಿಗೊಳಿಸಲಾಗಿದೆ. ಅದರಂತೆ ಪ್ರತಿ ಅಧಿಕಾರಿ/ಸಿಬ್ಬಂದಿಗೆ ಸೇವಾವಧಿಯಲ್ಲಿ ಕನಿಷ್ಠ ೦೩ ತರಬೇತಿಗಳನ್ನು ಕಡ್ಡಾಯಗೊಳಿಸಲಾಗಿದೆ. ತರಬೇತಿಗೆ ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಆಡಳಿತಾತ್ಮಕ ಕಾರಣಗಳನ್ನು ಹೊರತುಪಡಿಸಿ, ತರಬೇತಿಗೆ ಗೈರುಹಾಜರಾದರೆ ರೂ.೧,೦೦೦/- ಗಳನ್ನು ದಂಡ ರೂಪದಲ್ಲಿ ವಸೂಲು ಮಾಡಲಾಗುವುದು. ಇಲಾಖೆಗಳ ಅಗತ್ಯತೆಗೆ ಅನುಗುಣವಾಗಿ ತರಬೇತಿಗಳನ್ನು ಆಯೋಜಿಸಿ ಅಧಿಕಾರಿ/ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅದರಂತೆ, ೨೦೧೯-೨೦ನೇ ಸಾಲಿನಲ್ಲಿಯೂ ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಇಲ್ಲಿ ಕ್ಷೇತ್ರೀಯ ಇಲಾಖೆಗಳ ಅಧಿಕಾರಿಗಳು, ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳಿಗೆ ತರಬೇತಿ ನೀಡಲು ವಾರ್ಷಿಕ ವೇಳಾಪಟ್ಟಿಯನ್ನು ತಯಾರಿಸಿದ್ದು, ಅದರಂತೆ ತರಬೇತಿ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆಯಲ್ಲಿ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ೨೦೧೯-೨೦ನೇ ಸಾಲಿನ ವಾರ್ಷಿಕ ತರಬೇತಿ ವೇಳಾಪಟ್ಟಿಯನ್ನು ತಯಾರಿಸಿದ್ದು, ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ

ರಾಜ್ಯ, ಜಿಲ್ಲಾ ಮತ್ತು ಇಲಾಖಾ ಸರ್ವೋತ್ತಮ ಸೇವಾ ಪ್ರಶಸ್ತಿಗಳಿಗೆ ಸಂಬಂದಿಸಿದಂತೆ  ಮಾರ್ಗಸೂಚಿ ರಚಿಸುವುದು,  ಅನುದಾನ ಬಿಡುಗಡೆ ಮಾಡುವುದು ಹಾಗೂ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗಳಿಗೆ ಆಯ್ಕೆ ಕಾರ್ಯ ಮಾಡಲಾಗುತ್ತಿದೆ.  ವಿನೂತನ ಯೋಜನೆಗಳಿಗಾಗಿ ಚಾಲೆಂಜ್ ಫಂಡ್ ನಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ಕಾರ್ಯ ಮಾಡಲಾಗುತ್ತಿದೆ.

ಮಾನ್ಯ ರಾಜ್ಯಪಾಲರು ಗಣ ರಾಜ್ಯೋತ್ಸವದಂದು ಮಾಡುವ ಭಾಷಣದ ಕರಡನ್ನು ವಿವಿಧ ಇಲಾಖೆಗಳಿಂದ ಪಡೆದ ಮಾಹಿತಿಯನ್ವಯ ಕ್ರೋಢಿಕರಿಸುವ ಕಾರ್ಯ ಹಾಗೂ ಉಭಯ ಸದನಗಳನ್ನು ಉದ್ದೇಶಿಸಿ ಮಾನ್ಯ ರಾಜ್ಯಪಾಲರು ಮಾಡುವ ಭಾಷಣದ ಕರಡನ್ನು ಸಿದ್ದಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಸರ್ಕಾರದ ಮಟ್ಟದಲ್ಲಿ ಉತ್ತಮ ಸೇವೆ ನೀಡಲು ಹಾಗೂ ಯೋಜನೆಗಳ ಪ್ರಗತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ವಿವಿಧ ಇಲಾಖಾ ಪ್ರಗತಿ ಪರಿಶೀಲನೆ ನಡೆಸಲು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ಆಯೋಜಿಸುವ ಜವಾಬ್ದಾರಿ ಹೊಂದಿದೆ.

ಪ‍್ರತಿ ತಿಂಗಳು ಸಚಿವಾಲಯದ ಇಲಾಖೆಗಳಲ್ಲಿನ ಬಾಕಿ ಕಡತ ಮತ್ತು ಪತ್ರಗಳ ಬಗ್ಗೆ ಪರಿಶೀಲಿಸಲು  ಸರ್ಕಾರದ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳೊಂದಿಗೆ ಸಭೆಯನ್ನು  ಆಯೋಜಿಸುವ ಜವಾಬ್ದಾರಿ ಹೊಂದಿದೆ. ಈ ಸಭೆಯಲ್ಲಿ ಜನಸ್ಪಂದನ, ಬಾಕಿ ಕಡತಗಳ ಹಾಗೂ ಪತ್ರಗಳ ವಿಲೇವಾರಿ, ಇ-ಆಫೀಸ್, ಅವಧಿ ಮೀರಿದ ‘ಸಿ’ ವರ್ಗದಲ್ಲಿ ಮುಕ್ತಾಯವಾದ ಕಡತಗಳನ್ನು ನಾಶಪಡಿಸುವುದು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಇ-ಸಮೀಕ್ಷಾ, ಎಂ.ಎಂ.ಆರ್ ಸಭೆಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರವಾಸಗಳ ವರದಿ ಮತ್ತು 371-ಜೆ ರಲ್ಲಿನ ಪ್ರಗತಿ ಮುಂತಾದವುಗಳ ಬಗ್ಗೆ ಪರಿಶೀಲಿಸಲಾಗುತ್ತದೆ.

ರಾಜ್ಯದ ಅಭಿವೃದ್ಧಿ, ಯೋಜನಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಹಾಗೂ ಯೋಜನೆಗಳ ಅನುಷ್ಠಾನ ಹಾಗೂ ಅವುಗಳ ಪ್ರಗತಿ ಕುರಿತಂತೆ ಪರಿಶೀಲಿಸಲು ಎಲ್ಲಾ ಜಿಲ್ಲೆಗಳಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಇವರುಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸುವ ಜವಾಬ್ದಾರಿ ಹೊಂದಿದೆ. ಹಾಗೆಯೇ ಉಭಯ ಸದನಗಳು ನಡೆಯುವಾಗ ಅಧಿಕಾರಿಗಳ ಗ್ಯಾಲೆರಿಯಲ್ಲಿ ಹಾಜರಿರಲು ಅಧಿಕಾರಿಗಳನ್ನು ನಿಯೋಜಿಸುವ ಅಧಿಕಾರಿಗಳ ಸರದಿ ಪಟ್ಟಿಯನ್ನು ಹೊರಡಿಸುವ ಕಾರ್ಯವನ್ನು ಮಾಡುತ್ತಿದೆ.

ಕೇಂದ್ರ ಸರ್ಕಾರದ ೨ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಲ್ಲಿ ಅನುಸರಣಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮತ್ತು ಸಚಿವಾಲಯ ನೌಕರರಿಗೆ ಸಂಬಂಧಿಸಿದಂತೆ, ಜಂಟಿ ಸಮಾಲೋಚನಾ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ನೌಕರರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಲು ಸಭೆಗಳನ್ನು ನಡೆಸಿ, ಪರಿಹಾರಗಳಿಗೆ ಹಿಂಬಾಲಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಚಿವಾಲಯದಲ್ಲಿ ಹಾಗೂ ಕ್ಷೇತ್ರ ಇಲಾಖೆಗಳಲ್ಲಿ ಹೆಚ್ಚುವರಿ ಹುದ್ದೆಗಳ/ಶಾಖೆಗಳ ಸೃಜನೆ, ಅನಾವಶ್ಯಕ ಹುದ್ದೆಗಳ ರದ್ದತಿ, ಹುದ್ದೆಗಳ ಮರುಹೊಂದಾಣಿಕೆಯ ಕ್ರಮಗಳನ್ನು ಹಾಗೂ ಸಚಿವಾಲಯ ಮತ್ತು ಕ್ಷೇತ್ರ ಇಲಾಖೆಗಳಿಂದ ಬರುವ ಪ್ರಸ್ತಾವನೆಗಳ ಅನುಸಾರ ಹೊಸ ಶಾಖೆಗಳು, ಹೊಸ ಹುದ್ದೆಗಳ ಸೃಜನೆಯ ಬಗ್ಗೆ ಕಾರ್ಯಾಧ್ಯಯನ ನಡೆಸಿ ಅಗತ್ಯವಿರುವ ಹೊಸ ಹುದ್ದೆಗಳ ಸೃಜನೆ ಹಾಗೂ ಶಾಖೆಗಳನ್ನು ಸೃಜಿಸಲು ಶಿಫಾರಸ್ಸು ಮಾಡಲಾಗುತ್ತದೆ.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ –ವೆಬ್ ಸೈಟ್ ಆಧಾರಿತ ಇ-ಸಮಿಕ್ಷಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ಸರ್ಕಾರದ ವಿವಿಧ ಇಲಾಖೆಗಳ ಪ್ರಸ್ತಾವನೆಗಳ ಸಮನ್ವಯ ಕಾರ್ಯ ಮಾಡಲಾಗುತ್ತಿದೆ. ಇ-ಪ್ರಗತಿಗೆ ಸಂಬಂಧಿಸಿದಂತೆ ಸಚಿವಾಲಯದ ವಿವಿಧ ಇಲಾಖೆಗಳಿಗೆ ಸಂಬಂದಪಟ್ಟ ಮಾಹಿತಿಯನ್ನು ಸದರಿ ಇಲಾಖೆಗಳಿಂದ ಪಡೆದು ವೆಬ್ ಸೈಟ್ ನಲ್ಲಿ ಅಪ್-ಲೋಡ್ ಮಾಡಲಾಗುತ್ತಿದೆ.

ರಾಜಕೀಯ ವಿಶ್ರಾಂತಿವೇತನ

ದಿನಾಂಕ: ೨೧.೦೨.೧೯೬೯ ರ ಸರ್ಕಾರದ ಆದೇಶ ಸಂಖ್ಯೆ: ಜಿಎಡಿ ೯೪ ಪಿಎಫ್ ಎಸ್ ೬೮ ರನ್ವಯ, ಕರ್ನಾಟಕ ರಾಜ್ಯದಲ್ಲಿ ರಾಷ್ಟçದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಸೆರೆಮನೆವಾಸ ಅನುಭವಿಸಿದವರಿಗೆ, ಭೂಗತವಾಗಿ ಕಾರ್ಯ ನಿರ್ವಹಿಸಿದವರಿಗೆ ರಾಜ್ಯ ಗೌರವಧನ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಸ್ವಾತಂತ್ರ‍್ಯ ಸೈನಿಕ ಸನ್ಮಾನ ಗೌರವಧನ ಪರಿಯೋಜನೆ ೧೯೬೯ ಅನ್ನು ಜಾರಿಗೆ ತರಲಾಯಿತು. ಈ ನಿಯಮಾವಳಿಯ ಪ್ರಕಾರ, ಈ ಕೆಳಕಂಡ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದವರಿಗೆ/ಭೂಗತ ಕಾರ್ಯ ನಿರ್ವಹಿಸಿದವರಿಗೆ ರಾಜ್ಯ ಗೌರವಧನವನ್ನು ನೀಡಲಾಗುತ್ತದೆ.

  • ಅರಣ್ಯ ಸತ್ಯಾಗ್ರಹ
  • ೧೯೪೨ ರ ಭಾರತ ಬಿಟ್ಟು ತೊಲಗಿ ಚಳುವಳಿ
  • ೧೯೪೭ ರ ಸ್ವಾತಂತ್ರ್ಯ ಚಳುವಳಿ
  • ಮೈಸೂರು ಚಲೋ ಚಳುವಳಿ
  • ಹೈದ್ರಾಬಾದ್ ವಿಮೋಚನಾ ಚಳುವಳಿ

 

ರಾಜ್ಯದಲ್ಲಿ ಒಟ್ಟು ೬೧೫೨ ಜನರು ರಾಜ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಗೌರವಧನ ಮತ್ತು ಕುಟುಂಬ ಗೌರವಧನವನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ ೮೪೨ ಚಳುವಳಿಗಾರರಿಗೆ ರಾಜ್ಯ ಗೋವಾ ಗೌರವಧನ ಮಂಜೂರಾಗಿದೆ.

 

ರಾಜ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುತ್ತಿರುವ ಗೌರವಧನ ಮತ್ತು ಕುಟುಂಬ ಗೌರವಧನವನ್ನು ರೂ.೮,೦೦೦/-ರಿಂದ ರೂ.೧೦,೦೦೦/-ಗಳಿಗೆ ಹಾಗೂ ರಾಜ್ಯ ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುತ್ತಿರುವ ಗೌರವಧನ ಮತ್ತು ಕುಟುಂಬ ಗೌರವಧನವನ್ನು ರೂ.೩,೦೦೦/-ರಿಂದ ರೂ.೪,೦೦೦/-ಗಳಿಗೆ ದಿನಾಂಕ:೦೯.೦೬.೨೦೧೭ ರಿಂದ ಜಾರಿಗೆ ಬರುವಂತೆ ಹೆಚ್ಚಿಸಿದೆ.

 

ತಪಾಸಣೆ

ತಪಾಸಣೆ ಶಾಖೆಯಲ್ಲಿ ಸಚಿವಾಲಯ ಹಾಗೂ ಕ್ಷೇತ್ರ ಇಲಾಖೆಗಳ ತಪಾಸಣೆ ಕಾರ್ಯ ಹಾಗೂ ಹಾಜರಾತಿ ತಪಾಸಣೆ ಕಾರ್ಯ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ/ಅಧಿಕಾರಿಗಳ ಹಾಜರಾತಿ ಪದ್ಧತಿಯನ್ನು ಬಯೋಮೆಟ್ರಿಕ್ ಮೂಲಕ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ನವೆಂಬರ್ ೨೦೧೮ ರ ಮಾಹೆಯಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ/ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯಲ್ಲಿ ಮಿಸ್ಡ್ ಫ್ಲಾಶ್ ಆಗಿರುವ ಬಗ್ಗೆ ಕಾರಣ ಕೇಳುವ ನೋಟೀಸ್ ಜಾರಿ ಮಾಡಿ ಅಧಿಕಾರಿ/ನೌಕರರಿಂದ ವಿವರಣೆ ಪಡೆದು ಕೂಲಂಕಷವಾಗಿ ಪರಿಶೀಲಿಸಿ ವೇತನ ರಹಿತ ರಜೆ ಎಂದು ಪರಿಗಣಿಸಲು ಸಿ.ಆ.ಸು.ಇ. ವಿಭಾಗಕ್ಕೆ ನಿರ್ದೇಶನ ನೀಡಲಾಗಿದೆ.
ಸಚಿವಾಲಯ ವಾಹಿನಿಯ ಪತ್ರ ನಿರ್ವಹಣಾ ವ್ಯವಸ್ಥೆಯಲ್ಲಿ (ಎಲ್.ಎಂ.ಎಸ್) ೭ ದಿನಗಳಿಗೂ ಮೀರಿ ಬಾಕಿ ಇರುವ ಸ್ವೀಕೃತಿಗಳ ಕುರಿತು ಹಾಗೂ ಕಡತ ನಿರ್ವಹಣಾ ವ್ಯವಸ್ಥೆಯಲ್ಲಿ (ಎಫ್.ಎಂ.ಎಸ್) ೩೦ ದಿನಗಳಿಗೂ ಮೀರಿ ಚಲನೆಯಾಗದ ಬಾಕಿ ಕಡತಗಳ ಕುರಿತು ಇಲಾಖಾವಾರು ಸಮೀಕ್ಷೆಯನ್ನು ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಎಲ್ಲಾ ಇಲಾಖೆಗಳಲ್ಲಿ ಕಾರ್ಯ ದಕ್ಷತೆಯನ್ನು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ.

ಸಚಿವಾಲಯದ ಇಲಾಖಾವಾರು ಸಭೆ ಕರೆದು ದಾಖಲಾತಿ ವಿಭಾಗದಲ್ಲಿ ಅವಧಿ ಮೀರಿದ ಕಡತಗಳನ್ನು ಪರಿಶೀಲಿಸಿ ನಾಶಪಡಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಮತ್ತು ಎಲ್ಲಾ ಇಲಾಖೆಗಳಲ್ಲಿ ಎ, ಬಿ, ಸಿ ವರ್ಗದಲ್ಲಿ ಮುಕ್ತಾಯಗೊಂಡ ಕಡತಗಳನ್ನು ದಾಖಲಾತಿ ವಿಭಾಗಕ್ಕೆ ತ್ವರಿತವಾಗಿ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ‘ಡಿ’ ವರ್ಗದಲ್ಲಿ ಮುಕ್ತಾಯಗೊಂಡು, ಅವಧಿ ಮೀರಿದ ಕಡತಗಳನ್ನು ನಾಶ ಪಡಿಸಿ ಇಲಾಖೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿರುತ್ತದೆ. ವಿಧಾನಸೌಧ/ವಿಕಾಸಸೌಧ/ಬಹುಮಹಡಿ ಕಟ್ಟಡದ ಪಡಸಾಲೆಗಳಲ್ಲಿದ್ದ ಅನುಪಯುಕ್ತ ಅಲ್ಮೇರಾ ಹಾಗೂ ಪೀಠೋಪಕರಣಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಲು ಕ್ರಮವಹಿಸಲಾಗುತ್ತಿದೆ.

ಸಚಿವಾಲಯದ ಕೆಲವು ಇಲಾಖೆಗಳಲ್ಲಿ ಅಧಿಕಾರಿ/ಸಿಬ್ಬಂದಿ ಹೆಚ್ಚುವರಿಯಾಗಿರುವುದನ್ನು ಗುರುತಿಸಿ ಅಂತಹ ಅಧಿಕಾರಿ ಹಾಗೂ ನೌಕರರನ್ನು ಒತ್ತಡವಿರುವ/ಕೊರತೆಯಿರುವ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ.

 

ಆಡಳಿತದಲ್ಲಿ ದಕ್ಷತೆ ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಲು ದಿನಾಂಕ:೦೧.೦೧.೨೦೧೯ ರಿಂದ ಜಾರಿಗೆ ಬಂದಿರುವ ಇ-ಕಛೇರಿ ವ್ಯವಸ್ಥೆಯನ್ನು ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಹಾಗೂ ಕ್ಷೇತ್ರ ಇಲಾಖೆಗಳಲ್ಲಿ ಕಡ್ಡಾಯವಾಗಿ ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಈ ಬಗ್ಗೆ ದಿನಾಂಕ:೦೧.೦೫.೨೦೧೯ ರಂದು ಸರ್ಕಾರದ ಆದೇಶವನ್ನು ಹೊರಡಿಸಲಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ “ಎ” ಅಧಿಕಾರಿಗಳ ವಾರ್ಷಿಕ ಕಾರ್ಯ ನಿರ್ವಹಣಾ ವರದಿಗಳನ್ನು ೨೦೧೮-೧೯ ನೇ ಸಾಲಿನಿಂದ ಇ-ಪರ್ಫಾಮೆನ್ಸ್ ರಿಪೋರ್ಟಿಂಗ್ ಸಿಸ್ಟಮ್ (e-Performing Reporting System) ಆನ್ ಲೈನ್ ಮೂಲಕ ನಿರ್ವಹಿಸಲು ಪೂರ್ಣ ಕ್ರಮಗಳನ್ನು ವಹಿಸಲಾಗುತ್ತಿದೆ.

 
ಸಿ.ಆ.ಸು.ಇ. (ಆ.ಸು) ನಲ್ಲಿ ಸ್ವೀಕೃತಿ ಮತ್ತು ರವಾನೆ ಶಾಖೆಯನ್ನು ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ ೦೨ ಎಆರ್ ಡಿಎಸ್ ೨೦೧೯, ದಿನಾಂಕ:೨೯.೦೩.೨೦೧೯ ರಲ್ಲಿ ಸೃಜಿಸಲಾಗಿದೆ. ಈ ಶಾಖೆಯಲ್ಲಿ ಇ-ಆಫೀಸ್ ಮೂಲಕ ಪತ್ರಗಳ ಸ್ವೀಕೃತಿ ಮತ್ತು ರವಾನೆ ವಿಷಯ ಹಾಗೂ ಸಮನ್ವಯ ವಿಷಯವನ್ನು ನಿರ್ವಹಿಸಲಾಗುತ್ತಿದೆ..

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ) ಯ ಅಧೀನ ಸಂಸ್ಥೆಗಳು/ಸಮಿತಿ:

  • ಆಡಳಿತ ತರಬೇತಿ ಸಂಸ್ಥೆ, ಮೈಸೂರು
  • ಜಿಲ್ಲಾ ತರಬೇತಿ ಸಂಸ್ಥೆಗಳು.
  • ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆ, ಬೆಂಗಳೂರು.
  • ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ.

ಇತ್ತೀಚಿನ ನವೀಕರಣ​ : 30-12-2019 01:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080